
ಚಿಕ್ಕೋಡಿ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘Cybersecurity 360°’ ತಾಂತ್ರಿಕ ವಿಚಾರ ಸಂಕಿರಣ
ಚಿಕ್ಕೋಡಿ: ಇಲ್ಲಿನ ಕೆಎಲ್ಇ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿಯ ಎಂಸಿಎ (MCA) ವಿಭಾಗದ ವತಿಯಿಂದ ‘Cybersecurity 360° – Secure Your Digital World’ ಎಂಬ ವಿಷಯದ ಕುರಿತು ತಾಂತ್ರಿಕ ವಿಚಾರ ಸಂಕಿರಣ ಹಾಗೂ ಸಂವಾದಾತ್ಮಕ ಕಾರ್ಯಕ್ರಮವನ್ನು ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸ್ವಾಗತಿಸಿ ಮಾತನಾಡಿದ ಎಂಸಿಎ ವಿಭಾಗದ ಮುಖ್ಯಸ್ಥರಾದ ಡಾ. ಸುನೀಲ್ ಸಿ. ಶಿಂಧೆ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಭದ್ರತೆಯು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ತಾಂತ್ರಿಕ ಸಂಯೋಜಕರಾದ ಪ್ರೊ. ಆನಂದ ಮಿರ್ಜೆ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ಬಿಎಮ್ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಾಗರ ಗೌಡ ಪಾಟೀಲ ಅವರು, ಸೈಬರ್ ಬೆದರಿಕೆಗಳು, ಎಥಿಕಲ್ ಹ್ಯಾಕಿಂಗ್, ಪೆನೆಟ್ರೇಷನ್ ಟೆಸ್ಟಿಂಗ್, ಸೈಬರ್ ಅಪರಾಧ, ಡಿಜಿಟಲ್ ಫೊರೆನ್ಸಿಕ್ಸ್ ಹಾಗೂ ನೆಟ್ವರ್ಕ್ ಮತ್ತು ವೆಬ್ ಭದ್ರತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿ ನೀಡಿದರು.
ನೈಜ ಜೀವನದ ಉದಾಹರಣೆಗಳು ಹಾಗೂ ಸಂವಾದಾತ್ಮಕ ಚರ್ಚೆಗಳ ಮೂಲಕ ವಿಷಯವನ್ನು ಸರಳವಾಗಿ ವಿವರಿಸಿದ ಅವರು, ವೈಯಕ್ತಿಕ ಮಾಹಿತಿ, ಡಿಜಿಟಲ್ ಆಸ್ತಿ ಹಾಗೂ ನೆಟ್ವರ್ಕ್ಗಳನ್ನು ರಕ್ಷಿಸುವ ವಿಧಾನಗಳನ್ನು ತಿಳಿಸಿಕೊಟ್ಟರು. ಅಲ್ಲದೆ, ಸೈಬರ್ ಭದ್ರತಾ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳು ಹಾಗೂ ಅದಕ್ಕೆ ಅಗತ್ಯವಿರುವ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಚಿಕ್ಕೋಡಿ ಸಿಪಿಐ ಶ್ರೀ ವಿಶ್ವನಾಥ ಚೌಗುಲೆ ಹಾಗೂ ಬೆಳಗಾವಿ ಕ್ರೈಂ ಬ್ರಾಂಚ್ನ ಎಸ್ಐ ಶ್ರೀ ತಮ್ಮಣ್ಣ ಕೊಳಚಿ ಅವರು ಸೈಬರ್ ಅಪರಾಧ ತಡೆಗಟ್ಟುವಿಕೆ ಮತ್ತು ಡಿಜಿಟಲ್ ಸುರಕ್ಷತೆಯ ಕುರಿತು ಕಾನೂನು ಜಾರಿ ವ್ಯವಸ್ಥೆಯ ದೃಷ್ಟಿಕೋನ ಹಾಗೂ ಜಾಗೃತಿ ವಿಚಾರಗಳನ್ನು ಹಂಚಿಕೊಂಡರು.
ಕಾರ್ಯಕ್ರಮವು ಡಾ. ದರ್ಶನಕುಮಾರ ಡಿ. ಬಿಳ್ಳೂರ ಅವರ ಮಾರ್ಗದರ್ಶನದಲ್ಲಿ ನೆರವೇರಿತು. ಎಂಸಿಎ ಹಾಗೂ ಎಐ ಮತ್ತು ಡಿಎಸ್ (AI&DS) ವಿಭಾಗದ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಸಕ್ರಿಯವಾಗಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಇ-ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕುಮಾರಿ ಲಾವಣ್ಯ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಪಲ್ಲವಿ ಮಾಳಿ ಪ್ರಾರ್ಥನೆ ಹಾಡಿದರು. ಕುಮಾರಿ ಭಾಗ್ಯಶ್ರೀ ಮಾಳಗೆ ವಂದನಾರ್ಪಣೆ ನೆರವೇರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
Space for Advertisement